ಡೂಲಿಟ್ಲ್, ಹಿಲ್ಡಾ
1886-1961. ಅಮೆರಿಕದ ಕವಯಿತ್ರಿ. ತನ್ನ ಕೃತಿಗಳಲ್ಲಿ ಈಕೆ ಪೂರ್ತಿ ಹೆಸರಿಗೆ ಬದಲು ತನ್ನ ಹೆಸರಿನ ಆದ್ಯಕ್ಷರಗಳನ್ನೇ (ಎಚ್.ಡಿ.) ಬಳಸಿಕೊಂಡಿದ್ದಾಳೆ. ಹುಟ್ಟಿದ್ದು ಅಮೆರಿಕದ ಪೆನ್ಸಿಲ್ವೇನಿಯ ಸಂಸ್ಥಾನದ ಬೆತ್‍ಲೆಹಮ್ ಪಟ್ಟಣದಲ್ಲಿ. ತಂದೆ ಚಾಲ್ರ್ಸ್ ಎಲ್. ಡೂಲಿಟ್ಲ್ ಲೀಹೈ ವಿಶ್ವವಿದ್ಯಾಲಯದಲ್ಲಿ ಗಣಿತ ಹಾಗೂ ಖಗೋಳ ವಿe್ಞÁನಗಳ ಪ್ರಾಧ್ಯಾಪಕನಾಗಿದ್ದ. ಫಿಲಡೆಲ್ಫಿಯದ ಗಾರ್ಡನ್ ಸ್ಕೂಲ್ ಮತ್ತು ಫ್ರೆಂಡ್ಸ್ ಸೆಂಟ್ರಲ್ ಸ್ಕೂಲ್‍ಗಳಲ್ಲಿ ವಿದ್ಯಾಭ್ಯಾಸ ಪಡೆದ ಬಳಿಕ ಹಿಲ್ಡಾ ಪ್ರೌಢ ವಿದ್ಯಾಭ್ಯಾಸಕ್ಕಾಗಿ ಬ್ರಿನ್‍ಮಾರ್ ಕಾಲೇಜಿಗೆ ಸೇರಿದಳಾದರೂ ಅನಾರೋಗ್ಯದ ಕಾರಣ ಎರಡನೆಯ ವರ್ಷದಲ್ಲೇ ಕಾಲೇಜನ್ನು ಬಿಡಬೇಕಾಯಿತು.
ಹಿಲ್ಡಾ ಮೊಟ್ಟಮೊದಲು ಪ್ರಕಟಿಸಿದ ಕೃತಿ ಮಕ್ಕಳಿಗಾಗಿ ಬರೆದ ಕಥೆಗಳ ಒಂದು ಸಂಕಲನ. 1911ರಲ್ಲಿ ಈಕೆ ಯೂರೋಪಿಗೆ ಹೋದವಳು ಅಲ್ಲಿ ಎಜ್ರó ಪೌಂಡನಿಂದ ಆರಂಭವಾಗಿದ್ದ ಪ್ರತಿಮಾವಾದದ ಚಳವಳಿಗೆ ಸಿಕ್ಕಿ ಅಮೆರಿಕಕ್ಕೆ ಹಿಂದಿರುಗಲೇ ಇಲ್ಲ. ಸ್ವಲ್ಪಕಾಲದಲ್ಲೇ ಈಕೆ ಪ್ರತಿಮಾವಾದದ ನೇತಾರರಲ್ಲೊಬ್ಬಳಾದಳು.

1913ರಲ್ಲಿ ಹಿಲ್ಡಾ ಪ್ರತಿಮಾವಾದಿ ಕವಿ ರಿಚರ್ಡ್ ಆಲ್ಡಿಂಗ್‍ಟನ್ ಎಂಬಾತನನ್ನು ಮದುವೆಯಾದಳು. ಮುಂದೆ ಆತ ಹೆಸರಾಂತ ಕಾದಂಬರಿಕಾರನಾದ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಆಲ್ಡಿಂಗ್‍ಟನ್ ಬ್ರಿಟಿಷ್ ಸೈನ್ಯಕ್ಕೆ ಸೇರಬೇಕಾಯಿತು. ಆಗ ಹಿಲ್ಡಾ ಆತ ನಡೆಸುತ್ತಿದ್ದ ನಿಯತಕಾಲಿಕೆಯಾದ ಈಗೋಯಿಸ್ಟ್ ಎಂಬುದರ ಸಂಪಾದಕತ್ವವನ್ನು ತಾನೇ ವಹಿಸಿಕೊಂಡಳು. ಯುದ್ಧ ಮುಗಿದ ಹಲವು ವರ್ಷಗಳ ತರುವಾಯ ಈ ಸತಿಪತಿಯರು ದಾಂಪತ್ಯವಿಚ್ಛೇದನ ಮಾಡಿಕೊಂಡರು.

ಹಿಲ್ಡಾಳ ಕೃತಿಗಳು ಇವು: ಸೀ ಗಾರ್ಡನ್ (1916); ಹೈಮನ್ (1921); ಹೀಲಿಯೊಡೋರ (1924); ಕಲೆಕ್ಟೆಡ್ ಪೊಯೆಮ್ಸ್ (1940); ದಿ ವಾಲ್ಸ್ ಡೂನಾಟ್ ಫಾಲ್ (1944), ಟ್ರಿಬ್ಯೂಟ್ ಟು ದಿ ಏಂಜಲ್ಸ್ (1945) ಮತ್ತು ದಿ ಫ್ಲವರಿಂಗ್ ಆಫ್ ದಿ ರಾಡ್ (1946)- ಇವು ಒಂದು ಕೃತಿತ್ರಯ. ಈಕೆ ಯೂರಿಪಿಡೀಸನ ಐಯಾನ್ ನಾಟಕವನ್ನು ಅನುವಾದಿಸಿದ್ದಾಳಲ್ಲದೆ ಕೆಲವು ಕಾದಂಬರಿಗಳನ್ನೂ ಬರೆದಿದ್ದಾಳೆ.

ಹಿಲ್ಡಾಳ ಕೃತಿಗಳಲ್ಲಿ ಪ್ರತಿಮಾವಿಧಾನದ ಪ್ರಧಾನ ಲಕ್ಷಣಗಳನ್ನು ಹೆಜ್ಜೆ ಹೆಜ್ಜೆಗೂ ಕಾಣಬಹುದು.	  (ಕೆ.ವಿ.ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ